email : info@amrutheshwaratemple.in                 Temple Contact Number: +91 8242262169

ಕ್ಷೇತ್ರ ಪರಿಚಯ

ಭೂರಮೆ ಹಸಿರು ಸೀರೆಯುಟ್ಟು ಕಂಗೊಲಿಸುತ್ತಿರುವಂತೆ ಕಣ್ಮನ ತುಂಬುವ ಸುಂದರ ತಾಣ, ಕಂಗು-ತೆಂಗು, ತಾಳೆ-ಬಾಳೆ ಭತ್ತದ ಪೈರಿನ ಜೋಕಾಲಿ ಅನತಿದೂರದಲ್ಲಿ ನೀರಿನ ಝಳು ಝಳು. ಇದು ಮಂಗಳೂರಿನಿಂದ ಮೂಡಬಿದ್ರಿ ಕಡೆಗೆ ಸುಮಾರು 12 ಕಿಲೋ ಮೀಟರ್ ದೂರ ಕ್ರಮಿಸಿದಾಗ ಸಿಗುವ ವಾಮಂಜೂರು ಎಂಬ ಪುಟ್ಟ ಪೇಟೆಯ ಸೆರಗಿನಲ್ಲಿ ಹಚ್ಚ ಹಸುರಿನ ಪ್ರಕೃತಿಯ ಮಡಿಲಲ್ಲಿ ಶೋಭಿಸುತ್ತಿರುವ ವಾಮಂಜೂರು ಶ್ರೀ ಅಮೃತೇಶ್ವರ ದೇವಸ್ಥಾನ.

ಹೋಮಂತ್ಯೂರು: ಇದು ಪ್ರಕೃತಿಯ ರಮ್ಯನೆಲೆ. ಒಂದು ಕಾಲದಲ್ಲಿ ಋಷಿ ಮುನಿಗಳ ತಪಸ್ಸಿನ ತಪೋಭೂಮಿಯಗಿತ್ತು. ಸದಾ ಯಾಗ, ಯಜ್ಞ, ಹೋಮ ಹವನಾಧಿಗಳಿಂದ ಪುನೀತವಾಗಿ ಸನ್ಮಂಗಲವಾದ ಭೂಮಿಯಾಗಿತ್ತು. ಪ್ರಕೃತಿ ಮಡಿಲಿನಿಂದ ನಿತ್ಯ ಹೋಮ, ಧೂಮ, ನಭೋ ಮಂಡಲ ಸೇರಿ ಶುಭ್ರ ನಿರ್ಮಲ ಭಾವ ಮೂಡಿಸುತ್ತಿತ್ತು. ಹಾಗೆಯೆ ಸದಾ ಹೋಮಗಳಿಂದ ಮೆರೆಯುತಿದ್ದ ಊರು ಹೋಮಂತ್ಯೂರು ಎಂದೇ ಕರೆಯಲ್ಪಡುತ್ತಿತ್ತು. ದೇವತಾ ಪ್ರೀತಿಯ ಹೋಮಂತ್ಯೂರು ಮುಂದೆ ರೂಢಿಯಲ್ಲಿ ವಾಮಂಜೂರು ಆಗಿ ಬದಲಾಯಿತು.

ಈ ಪುಣ್ಯ ಭೂಮಿಯಲ್ಲಿ ಸುಮಾರು ಒಂದು ಸಾವಿರ ವರ್ಷಗಳ ಹಿಂದೆ ಶ್ರೀ ಅಮೃತೇಶ್ವರ ದೇವರು ನೆಲೆಯಾದುದರ ಹಿಂದೆ ಒಂದು ಅಪೂರ್ವ ಐತಿಹಾಸಿಕ ಕಥೆ ಇದೆ. ನಂಬಿದ ಭಗವಂತ ಬೆಂಬಿಡದೆ ಕಾಪಾಡುತ್ತಾನೆ ಎನ್ನುವ ನಂಬಿಕೆ ಸಾಕ್ಷ್ಯವಿದೆ. ವಿಷವನ್ನು ಅಮೃತಮಾಡಿದ ದೇವಲೀಲೆಯ ನಿದರ್ಶನವಿದೆ.

ಸ್ಥಳಪುರಾಣ

ಸುಮಾರು ೭೦೦ ವರ್ಷಗಳ ಹಿಂದೆ, ಈಗ ಕುಂಬುಳೆಯ ಮಾಯಪ್ಪಾಡಿಯಲ್ಲಿರುವ ಕ್ಷತ್ರಿಯ ಅರಸರ ಕುಟುಂಬಿಕರು ಮಂಗಳೂರು ತಾಲೂಕಿನ, ಉಳಾಯಿಬೆಟ್ಟು ಗ್ರ್ರಾಮದ ಅನಂತ ಕೋಡಿ ಎಂಬಲ್ಲಿ ಅರಮನೆ ಕಟ್ಟಿಕೊಂಡು ವಾಸಮಾಡಿ, ಆ ಪ್ರಾಂತ್ಯವನ್ನು ಆಳುತ್ತಿದ್ದರು.

ಆ ಕಾಲದ ರಾಜನೇ ರಾಮಂತಾಯ ಎಂಬ ಕ್ಷತ್ರಿಯ ಅರಸನು, ಅವನಿಗೆ ಕೃಷ್ಣ ಶರ್ಮ, ರಾಮ ಶರ್ಮ ಎಂಬಿಬ್ಬರು ಅಳಿಯಂದಿರಿದ್ದರು. ಕೃಷ್ಣ ಶರ್ಮನು ತಿರುವೈಲು ಗ್ರಾಮದ ಪರಾರಿ ಎಂಬ ಸ್ಥಳದಲ್ಲಿಯೂ, ರಾಮಶರ್ಮನು ಉಳಾಯಿಬೆಟ್ಟು ಗ್ರಾಮದ ಇಡ್ಮ ಪರಾರಿ ಎಂಬ ಸ್ಥಳದಲ್ಲಿಯೂ ಅರಮನೆ ಕಟ್ಟಿಕೊಂಡು ವಾಸವಾಗಿದ್ದರು. ಕೃಷ್ಣಶರ್ಮನಿಗೆ ತಿರುವೈಲು ಗ್ರಾಮದಲ್ಲಿ ೪೨ ಕೋರ್ಜಿ ಅಕ್ಕಿ ಸ್ಥಳ ಹಾಗು ರಾಮಶರ್ಮನಿಗೆ ೪೨ ಕೋರ್ಜಿ ಅಕ್ಕಿಯ ಸ್ಥಳವನ್ನು ರಾಜಸ್ಥಾನದಿಂದ ಬಿಟ್ಟಿದ್ದರು. ಅವರ ಕುಲದೇವತರಾಗಿ ಉಳಾಯಿಬೆಟ್ಟು ಗ್ರಾಮದ ಸಾಲೆ ಎಂಬಲ್ಲಿ ಗಣಪತಿ ಮತ್ತು ಈಶ್ವರ ದೇವಸ್ಥಾನವಿತ್ತು.

ಈ ದೇವಸ್ಥಾನದ ಉತ್ತರ ಪಾಶ್ರ್ವದಲ್ಲಿ ಮೃಕಂಡು ತೀರ್ಥ ಅಥವಾ ಪಾಲ್ಗುಣಿ ಹೊಳೆಯು ಹರಿಯುತ್ತಿದೆ. ನದೀತೀರದಲ್ಲಿ ಮಹಾಮಲೆ ಕಾಡು ಬೆಳೆದಿತ್ತು. ಈ ಮಲೆನಾಡಿನಲ್ಲಿ ದ್ವಾದ ಕನ್ಯತೀರ್ಥ ಅಥವಾ ಪದ್ರಡ್ ಕವಲಿ ನಿಂದ ಇಲ್ಲಿಯ ವರೆಗೆ ಈ ಪುಷ್ಯಾ ನದಿತೀರದಲ್ಲಿ ಸಪ್ತ ಋಷಿಗಳು ವಾಸವಾಗಿದ್ದರು. ದೇವಸ್ಥಾನದ ಎದುರು ಮೈದಾನದಲ್ಲಿ ಅವರು ಯಾಗಶಾಲೆಯನ್ನು ರಚಿಸಿ, ಯಜ್ಞ, ಯಾಗಾದಿಗಳನ್ನು ಮಾಡುತ್ತಿದ್ದರು. ಈಗ ಅದು ಬೆಳೆಯಾಗುವ ಬಾಕಿಮಾರಾಗಿದೆ. ಆದರೆ ಆಳುದ್ದ ಅಗೆದೆರೆ ಹೋಮದ ಮಸಿತುಂಡುಗಳು ಸಿಗುವುದು.

ದೇವಸ್ಥಾನದ ದಕ್ಷಿಣಕ್ಕೆ ಫಲ್ಗುಣಿ ಹೊಳೆಯಿಂದ ಮಲ್ಲೂರು ಅಂತ್ಯದವರಗೆ , ಅಂದರೆ ಬೆಂಜನಪದವಿನವರೆಗೆ ಪೇಟೆಯಿತ್ತು. ಈ ಪೇಟೆಗೆ ಸಾಲೆಪೇಟೆ ಅಥವಾ ಮುಸಲ್ಮಾನ ಪೇಟೆಯೆಂದು ಕರೆಯುತ್ತಿದ್ದರು. ಇಲ್ಲಿ ಸುತ್ತಮುತ್ತಲೂ ಮುಸಲ್ಮಾನರೇ ವಾಸವಾಗಿದ್ದು, ಹಿಂದೂಗಳು ತುಂಬಾ ವಿರಳ. ಇಲ್ಲಿ ೧೫೬ ಪಟ್ಟಾದಾರ ಮುಸಲ್ಮಾನ ಶ್ರೀಮಂತರಿದ್ದರು.

ಈ ಗಣಪತಿ, ಈಶ್ವರ ಎಂಬ ಕುಲದೇವರ ಪೂಜೆ, ನಂದಾದೀಪ, ನಿತ್ಯನೈವೇದ್ಯಗೆ ಒಟ್ಟು ೫ ಎಕ್ರೆ ಸ್ಥಳವನ್ನು ಉಂಬಳಿ ಬಿಟ್ಟು ಜೈನ ಕಾಶಿ ಸಮೀಪವಿರುವ ಮೂರ್ನಾಡಿನಿಂದ. ಒಂದು ವಿಪ್ರ ಕುಲದವರನ್ನು ತರಿಸಿ, ಅವರಿಗೆ ದಕ್ಷಿಣ ದೇವಸ್ಥಾನದ ದಕ್ಷಿಣ ಭಾಗದಲ್ಲಿ ಒಂದು ಮನೆಯನ್ನು ಕಟ್ಟಿಸಿ, ಅವರಿಗೆ ದೇವಸ್ಥಾನದ ಮೊಕ್ತೇಸರಿಕೆ ವಹಿಸಿ, ಅರಸು ಕುಟುಂಬಿಕರು ಸದಾ ದೇವಭಜಕರಾಗಿದ್ದರು.

ಕ್ರಮೇಣ ಕಾರ್ಮಿಕನಾದ ರಾಮಂತಾಯ ಅರಸನಿಗೆ ಮಕ್ಕಳಿಲ್ಲದಿದ್ದರಿಂದ ಈ ಸಪ್ತ ಋಷಿಗಳ ಮೂಲಕ, ದೇವಸ್ಥಾನದ ಎದುರು ಪುತ್ರಾಕಾಮೇಷ್ಟಿಯಾಗವನ್ನು ಮಾಡಿಸಿದನು. ಇದರಿಂದ ಬಹು ಪುತ್ರರನ್ನು ಪಡೆದು ಸುಖಿಯಾಗಿದ್ದನು. ಯಾಗದ ಕಾಲದಲ್ಲಿ ವಿಪ್ರಕುಲಕ್ಕೆ ಅನ್ನದಾನ ಮಾಡಲು, ಈಗ ಸಾಲೆಮನೆ ಇರುವಲ್ಲಿ ಅನ್ನಸಾಲೆ ಕಟ್ಟಿಸಿದ್ದನು. ಯಾಗಕ್ಕಾಗಿ ಈ ತುಳುನಾಡಿನಲ್ಲಿ ಹಾಲು ತರುತ್ತಿದ್ದ ವಾರ್ಡಿಗೆ ಪೆರ್ಮಂಕ್ಕಿ ಎಂತಲೂ, ಮೊಸರು ತರುತ್ತಿದ್ದ ವಾರ್ಡಿಗೆ ಬೆಂಜನಪದವು ಎಂತಲೂ, ಫಲಪುಷ್ಪ ತರುತ್ತಿದ್ದ ವಾರ್ಡಿಗೂ ಪಡು ಎಂತಲೂ, ಬೊಂಡ ತರುತ್ತಿದ್ದ ವರ್ಡಿಗೆ ಬೊಂಡನಲ ಎಂತಲೂ ನಾಮಕರಣ ಮಾಡಿದ್ದನು. ಅದೇ ಹೆಸರು ಈಗಲೂ ರೂಢಿಯಲ್ಲಿದೆ. ಈಗಲೂ ಆ ಮನೆಗೆ ಸಾಲೆಮನೆ ಎಂದು ಕರೆಯುತ್ತಾರೆ.

ಅರಮನೆಯ ಎದುರು ಒಂದು ಸಿದ್ಧ ರಸದ ಬಾವಿಯಿದೆ. ಇದರ ರಸದಿಂದ ಅಸ್ಥಾನದ ಖರ್ಚಿಗೆ ಬೇಕಾದಷ್ಟು ದ್ರವ್ಯ ಸಂಗ್ರಹ ಮಾಡುತ್ತಿದ್ದನಂತೆ. ರಾಜನ ಪುತ್ರಕಾಮೇಷ್ಟಿ ಯಾಗಕ್ಕೆ ಈ ಬಾವಿಯ ಸಿದ್ಧ ರಸದಿಂದಲೇ ದ್ರವ್ಯ ಸಂಗ್ರಹ ಮಾಡಿದ್ದನಂತೆ. ಈಗಲೂ ಆ ಬಾವಿವಿದೆ. ಅದಕ್ಕೆ ಮೂರು ಅಂತಸ್ತಿನಿಂದ ಹಾಸುಗಲ್ಲು ಮಚ್ಚಲ್ಪಟ್ಟಿರುವುದು. ಅದನ್ನು ಅಗೆದರೆ ದೊಡ್ಡ ದೊಡ್ಡ ತುಂಬಿಗಳು, ಹಾವುಗಳೂ ಉಪದ್ರವಿಸುತ್ತವೆ. ಅದಕ್ಕಾಗಿ ಅದರ ಗೋಜಿಗೆ ಯಾರೂ ಹೋಗುವುದಿಲ್ಲ. ರಾಜಸ್ಥಾನದಲ್ಲಿ ಗಂಡೊಂದು, ಹೆಣ್ಣೊಂದು ಆನೆಗ್‍ಳಿದ್ದವು. ಅವುಗಳನ್ನು ತಿರುವೈಲು ಪದವಿನಲ್ಲಿರುವ ಆನೆಗುಂಡಿ ಎಂಬ ಮಲೆಯಿಂದ ಹಿಡಿದು ಪಳಗಿಸಿ, ಅರಮನೆ ಮುಂದುಗಡೆ ಕಟ್ಟಿ ಹಾಕುತ್ತಿದ್ದ 2 ಆನೆಕಲ್ಲು ಕಂಬಗಳು ಈಗಳು ಇದೆ. ಈಗ ಆನೆಗುಂಡಿ ಕಡಿದು ಬೆಳೆಯಾಗುವ ಗದ್ದೆಗಳಾಗಿವೆ. ಯಾಗದ ಫಲವಾಗಿ ಅರಸನಿಗೆ ಪುತ್ರಸಂತಾನವಾಗಲು ಆಸೂಯೆಪಟ್ಟ ಅಳಿಯಂದಿರು ಮಾವನಿಗೆ ಅರ್ಚಕರ ಮೂಲಕ ವಿಷವನ್ನು ತೀರ್ಥದಲ್ಲಿ ಕಲಸಿಕೊಡುವಂತೆ ಅರ್ಚಕರಿಗೆ ಲಂಚ ಕೊಟ್ಟು ಒಪ್ಪಿಸಿದರು. ಒಂದು ದಿನ ರಾಜನು ತೀರ್ಥಪ್ರಸಾದ ತೆಗೆದುಕೊಳ್ಳಲು ದೇವಸ್ಥಾನಕ್ಕೆ ಹೋದಾಗ ತೀರ್ಥಕೊಡುವ ಅರ್ಚಕನ ಕೈಕಾಲು ನಡುಗಲು, ಕಾರಣವೇನೆಂದು ವಿಚಾರಿಸಲು, ರಾಜ ದ್ರೋಹಿಯಾದ ಬ್ರಾಹ್ಮಣನ ಮೂಲಕ ಈ ವಂಚನೆಯು ರಾಜನ ತಿಳುವಳಿಗೆ ಬಂದು, ನಾನು ಕ್ಷತ್ರಿಯನಾದ್ದುದ್ದರಿಂದ ನೀಡಿದ ಕೈ ಹಿಂದಕ್ಕೆಳೆಯಲಾರೆ. ಆದರೆ ಈ ತೀರ್ಥದಲ್ಲಿರುವ ವಿಷ ಅಮೃತವಾದರೆ ಇದೇ ಪ್ರದೇಶದಲ್ಲಿ ಒಂದು ಶಿವನ ದೇವಸ್ಥಾನ ಸ್ಥಾಪಿಸಿ, ಆ ದೇವರಿಗೆ “ಅಮೃತೇಶ್ವರ” ಎಂಬ ನಾಮಕರಣ ಮಾಡುವೆನೆಂದು ಹರಿಕೆ ಹೇಳಿ ಕುಡಿದೇಬಿಟ್ಟನು. ಅದು ಅಮೃತವಾಯಿತು.

ಮರುದಿನವೇ ಆದಿದ್ರಾವಿಡ ತಿರುವನ ಸ್ವಾಧೀನವಿದ್ದ ಹಳ್ಳಿಯ ಮದ್ಯಪ್ರದೇಶದಲ್ಲಿ ಒಂದು ಶಿವಲಿಂಗ ಸ್ಥಾಪನೆ ಮಾಡಿಸಿ, ಗುಂಡ ಕಟ್ಟಿಸಿ, ಪೂಜಾ ವಿನಿಯೋಗಗಳ ಬಗ್ಗೆ 3 ಕೋರ್ಜಿ ಅಕ್ಕಿಯ ಸ್ಥಳ ಉಂಬಳಿ ಬಿಟ್ಟು, ತಿರುವೈಲು, ಬೊಂಡಂತಿಲ, ಪೆರ್ಮಂಕಿ, ಪಡು, ಉಳಾಯಿಬೆಟ್ಟು ಎಂಬ 5 ಗೊತ್ತುವಳಿಯರನ್ನು ನೇಮಿಸಿ, ಅವರ ಮೂಲಕ ಈ ಅಮೃತೇಶ್ವರ ದೇವಸ್ಥಾನದಲ್ಲಿ 9 ದಿನಗಳ ಜಾತ್ರೆ ಜರುಗುವಂತೆ ಏರ್ಪಡಿಸಿ, ತನ್ನ ಅಳಿಯಂದಿರಿಬ್ಬರನ್ನು ಮರಣದಂಡನೆಗೆ ವಿಧಿಸಿ, ಅವರ ಜೀವನಕ್ಕೆ ಬಿಟ್ಟಿದ್ದ 42 ಕೋರ್ಜಿ ಅಕ್ಕಿಯ ಸ್ಥಳವನ್ನು ತನ್ನ ಮಂತ್ರಿಯಾದ ಜನಾರ್ಧನ ರಾವ್ ಎಂಬ ವಿಪ್ರೋತ್ತಮನಿಗೆ ಬಿಟ್ಟುಕೊಟ್ಟು, ತೆಕ್ಕಿಬೆಟ್ಟು ಎಂಬ ಸ್ಥಳದಲ್ಲಿ ಒಂದು ಮನೆ ಕಟ್ಟಿಸಿ, ಆತನು ಅಲ್ಲಿ ಇದ್ದು, ಅಮೃತೇಶ್ವರನ ಪೂಜಾದಿಗಳನ್ನು ಮಾಡಿಸಬೇಕೆಂದೂ, ಮಂತ್ರಿಯೇ ಆದಿಯಾಗಿ, ಗುತ್ತಿನವರೆಲ್ಲರೂ ಆ ದೇವಸ್ಥಾನದ ಮೊಕ್ತೇಸರರೆಂತಲೂ, ನೇಮಕ ಮಾಡಿ, ಮಂತ್ರಿ ಕುಲದೇವನಾಗಿ ಒಂದು ವಿಷ್ಣು ಪ್ರತಿಮೆಯನ್ನು ಉಪ್ಪಿನಂಗಡಿಯಿಂದ ತರಿಸಿ ಮಂತ್ರಿ ಅರಮನೆಯೆದುರು ತೆಕ್ಕಿನ ಮರಗಳಿರುವ ಕಾಡಿನ ಮಧ್ಯದಲ್ಲಿ ಸ್ಥಾಪಿಸಿ ಗುಂಡ ಕಟ್ಟಿಸಿ, ಅದಕ್ಕೆ ವಿಷ್ಣುಮೂರ್ತಿ ಎಂಬ ಹೆಸರಿಟ್ಟು ಪೂಜಿಸುವಂತೆ ಮಂತ್ರಿಗೆ ಅಜ್ಞಾಪಿಸಿದನು. ತಾನು ತಿರುವನ ಗುಡಿಯನ್ನು ಮುರಿದು, ಆ ಸ್ಥಳದಲ್ಲಿ ಅರಮನೆ ಕಟ್ಟಿ, ಅದನ್ನೇ ರಾಜಧಾನಿಯಾಗಿಟ್ಟುಕೊಂಡು ವಾಸವಾಗಿದ್ದನು. ಆನಂತರ ಪೆರ್ಮಂಕ್ಕಿಯಲ್ಲಿ ಸ್ದಾಶಿವ ದೇವಸ್ಥಾನವನ್ನೂ, ಪಡುವಿನಲ್ಲಿ ದುರ್ಗಾ ಪರಮೇಶ್ವರೀ ದೇವಸ್ಥಾನವನ್ನೂ, ಬೊಂಡಂತಿಲದಲ್ಲಿ ಕಲ್ಲುಡೇಲು ಸದಾಶಿವ ದೇವಸ್ಥಾನವನ್ನೂ ಕಟ್ಟಿಸಿ, ಪೂಜೆ ವಿನಿಯೋಗಕ್ಕೆ ರಾಮಶರ್ಮ ಸ್ವಾಧೀನವಿದ್ದ 42 ಕೋರ್ಜಿ ಅಕ್ಕಿಯ ಸ್ಥಳವನ್ನು ಹಂಚಿ ಉಂಬಳಿಯಾಗಿ ಬಿಟ್ಟು, ದೇವತಾ ಪ್ರೀತಿಗೆ ಪಾತ್ರನಾದನು. ರಾಜದ್ರೋಹಿಯಾದ ಬ್ರಾಹ್ಮಣ ಕುಟುಂಬಕ್ಕೆ, ಆ ದ್ರೋಹ ತಪ್ಪಲಿಲ್ಲ. ಈಗಲೂ ಒಂಜಿ ತಪ್ಪಡ, ರಡ್ಡ್ ಉಪ್ಪಡ ಎಂಬಂತೆ ಕ್ಷೀಣವಾಗುತ್ತ ತಂತು ಮಾತ್ರ ಕುಟುಂಬವು ಈಗಲೂ ಬಹಳ ಬಡ ಸ್ಥಿತಿಯಲ್ಲಿದೆ.

ಹೀಗೆ ಕೆಲವು ಸಮಯದ ನಂತರ ಉಪ್ಪೂರಿಂದ ಬಂದ ಷಡ್‍ಶಾಸ್ತ್ರ ಪಂಡಿತನಾದ ಒಂದು ಬ್ರಾಹ್ಮಣ ಕುಟುಂಬವನ್ನು ಇಲ್ಲಿಯೇ ನಿಲ್ಲುವಂತೆ ಪ್ರಾರ್ಥಿಸಿ, ಆರು ಅಜಲೆ ಸ್ಥಳವನ್ನು ಉಂಬಳಿ ಬಿಟ್ಟು, ಮಂತ್ರಿಯಿಂದ ಅಮೃತೇಶ್ವರನ ಪೂಜೆ ಹಕ್ಕನ್ನು ಬಿಡಿಸಿ, ಮಾಗಣೆ ಪೌರೋಹಿತ್ಯ, ಅಮೃತೇಶ್ವರ ಪೂಜೆ ಅವರಿಗೆ ಒಪ್ಪಿಸಿ ಅವರನ್ನೂ 5 ಗುತ್ತಿನವರನ್ನೂ ಮಂತ್ರಿ ಸಹಿತ 7 ಜನ ಮೊಕ್ತೇಸರರನ್ನು ನೇಮಿಸಿ, ಈ ದೇವಸ್ಥಾನವನ್ನು ಸೂರ್ಯಚಂದ್ರಾದಿಗಳು ಇರುವ ವರೆಗೆ ನಡೆಸಿಕೊಂಡು ಬರುವಂತೆ ಏರ್ಪಡಿಸಿದ್ದನು. ಅವರಿಗೆ ಉಳಕೊಳ್ಳುವುದಕ್ಕೆ ಉಂಬಳೀಬಿಟ್ಟ ಅಸ್ತಿಯಲ್ಲಿಯೇ ಒಂದು ಚವುಕಿ ಮನೆ ಕಟ್ಟಿಸಿ, ಅದರಲ್ಲಿ ಅವರು ಹೊತ್ತು ತಂದಿರುವ ಮಹಾಗಣಪತಿಯನ್ನು ಪ್ರತಿಷ್ಟಿಸಿ, ನಿತ್ಯ ನೈವೇದ್ಯ, ನಂದಾದೀಪಕ್ಕೆ ತಕ್ಕ ಏರ್ಪಾಡು ಮಾಡಿ, ಮಹಾಗಣಪತಿಯನ್ನು ಇಡೀ ಮಾಗಣೆಯವರು ಆರಾಧಿಸಿ, ಹಣ್ಣು ಕಾಯಿ, ಅಪ್ಪದ ಪೂಜೆ, ಹೂವಿನ ಪೂಜೆ, ಗಣಹೋಮ ಇತ್ಯಾದಿ ಹರಿಕೆ ಕಾಣಿಕೆಗಳನ್ನು ಒಪ್ಪಿಸಿ, ಮಹಾಗಣಪತಿಯ ಪ್ರೀತಿಗೆ ಪಾತ್ರರಾಗಿರಬೇಕೆಂದು ಆಜ್ಞೇಪಿಸಿದನು.

ಕ್ರಮೇಣ ಗುತ್ತಿ ವರ ಅಧಿಕಾರ ಹೆಚ್ಚುತ್ತಲೇ ಅಮೃತೇಶ್ವರನಿಗೆ ರಾಜಸ್ಥಾನದಿಂದ ಬಿಟ್ಟ 3 ಕೋರ್ಜೆ ಅಕ್ಕಿ ಸ್ಥಳದಲ್ಲಿ ಅರ್ಧ ಕೋರ್ಜಿ ಸ್ಥಳ ಮಾತ್ರ ದೇವರ ಹೆಸರಲ್ಲಿ ಉಳಿದು, 21/2 ಕೋರ್ಜಿ ಅಕ್ಕಿ ಸ್ಥಳ ಪಡು ಮುಂಡಿತಾಯ ಎಂಬ ದೈವದ ಹೆಸರಿಗೆ ತರ್ಜಿಮೆಯಾಯಿತು. ಅದು ಈಗಲೂ ಇದೆ. ದೇವಸ್ಥಾನದ ಅರ್ಧ ಕೋರ್ಜಿ ಅಕ್ಕಿ ಸ್ಥಳಕ್ಕೆ ಕ್ರಮೇಣ ಯಾರೋ ಒಬ್ಬ ಆಡಳಿತದಾರನ ಕಾಲ ಮೂಲಗೇಣಿಗೆ ಕೊಟ್ಟು ಈಗ ಅಮೃತಪಡಿಗೂ ದಿಕ್ಕಿಲ್ಲದೆ 40-0-0 ರೂಪಾಯಿ ನಗದಿ ಗೇಣಿ ಮಾತ್ರ ಸಿಕ್ಕುತ್ತಿರುವುದು. ಪುರಾತನ ದೇವಸ್ಥಾವಾದ್ದರಿಂದ 283-0-0 ತಸದೀಕು ಇದೆ. ಈಗ ಎಂಡೋಮೇಂಟಿನ ಒಬ್ಬನೇ ಆಡಳಿತ ಮೋಕ್ತೇಸರನಿಂದ ತಂತು ಮಾತ್ರ ವಿನಿಯೋಗಗಳು ನಡೆಯಲ್ಪಡುವುದು.

ಕ್ರಮೇಣ ಸಾಲೆಪೇಟೆಯ ಪುಂಡರ ಹಾವಳಿ ಹೆಚ್ಚಿ ರಾಜಸ್ಥಾನಕ್ಕೆ ದಕ್ಕೆ ಬಿದ್ದು, ಕಡೆಗೆ ಇಲ್ಲಿ ನಿಲ್ಲಲು ಅವಕಾಶವಿಲ್ಲದೆ, ರಾತ್ರಿ ಕಾಲ ಹೇಳದೆ ಕೇಳದೆ ಓಡಿಹೋಗಿ, ಕುಂಬಳೆ ಮಾಯಪ್ಪಾಡಿ ಎಂಬಲ್ಲಿ ಇಲ್ಲಿಯಂತೆಯೇ ತಕ್ಕ ವ್ಯವಸ್ಥೆ ಮಾಡಿಕೊಂಡು ರಾಜ್ಯವಾಳುತ್ತಿದ್ದನು. ಮಾಯಪ್ಪಾಡಿಯಲ್ಲಿ ಈಗಲೂ ಅರಮನೆಯ ಕೋಟೆವಿದೆ. ಅವನ ಸಂತತಿಯವರು ಈಗಲೂ ಅಲ್ಲಿದ್ದಾರೆ.

ಅರಸರ ದರ್ಬಾರು ನಿಂತೊಡನೆ ಅವನ ಸ್ಥಾಪನೆಗಳು ಅಸ್ತವ್ಯಸ್ತವಾದುವು. ಇವುಗಳ ಪೈಕಿ ಕೆಲವು ದೇವಸ್ಥಾನಗಳಲ್ಲಿ ತಂತು ಮಾತ್ರ ಪೂಜೆ ನಡೆಯಲ್ಪಡುವುದು. ಅಮೃತೇಶ್ವರ ದೇವಸ್ಥಾನದಲ್ಲಿ ವರ್ಷಕ್ಕೊಮ್ಮೆ ಮೇಷಸಂಕ್ರಮಣಕ್ಕೆ ಧ್ವಜರೋಹಣವಾಗಿ 5 ದಿನ ಚೆಂಡು, ಮಹಾ ರಥೋತ್ಸವ ಇತ್ಯಾದಿಗಳು ಜರಗಲ್ಪಡುವುದು.

ಕಾಲಕ್ರಮದಿಂದ ಈ ದೇವಸ್ಥಾನಗಳು ಕುಸಿದುಬೀಳುವ ಸಂಭವ ಬಂದು, ದುರಸ್ತಿಪಡಿಸುವ ಧಾತಿಕರಿಲ್ಲದೆ, ಕೆಲವು ವರ್ಷಗಳ ಹಿಂದೆ, ಪೆರ್ಮಂಕಿ ಶಿವಣ್ಣಯ್ಯ ಎಂಬ ವಿಪ್ರೋತ್ತಮರು ಮಾಗಣೆಯ ಅಮೃತೇಶ್ವರ ದೇವಸ್ಥಾನಕ್ಕೆ ಗರ್ಭಗುಂಡಕ್ಕೆ ತಾಮ್ರ ಮುಚ್ಚಿಸಿ, ಸುತ್ತಲೂ, ಕೆಂಪು ಕಲ್ಲಿನ ಪೌಳಿ ಕಟ್ಟಿಸಿ, ಬ್ರಹ್ಮಕಲಶ ಮಡಿಸಿದ್ದರು. ಮತ್ತು ಗೋಪುರ ಕಟ್ಟಿಸಲೇಬೇಕೆಂದು ಹಟಾತ್ತಾಗಿ ಹಾಕುತ್ತಿರುವಾಗ ಗುತ್ತಿನವರಿಗೂ ಇವರಿಗೂ ಏನೋ ಕಾರಣಗಳಿಂದ ಅಂತಃಕಲಹ ಹುಟ್ಟಿ ಕೆಲಸವನ್ನು ನಿಲ್ಲಿಸಿಯೇ ಬಿಟ್ಟಿದ್ದರು.

ಆನಂತರ ಆ ಪುಣ್ಯಾತ್ಮನು ಪೆರ್ಮಂಕಿ ಸದಾಶಿವ ದೇವಸ್ಥಾನವನ್ನೂ, ಸಾಲೆ ಗಣಪತಿ ದೇವಸ್ಥಾನವನ್ನೂ, ಪಡು ದುರ್ಗಾಪರಮೇಶ್ವರಿ ದೇವಸ್ಥಾನವನ್ನೂ, ನಂದಾವರ ಈಶ್ವರ ದೇವಸ್ಥಾನವನ್ನೂ ಕಟ್ಟಿಸಿ ಬ್ರಹ್ಮಕಲಶ ಮಾಡಿಸಿದ್ದರು. ಅವರ ಅವಸಾನ ಕಾಲದಲ್ಲಿ, ತೆಕ್ಕಿಬೆಟ್ಟು ವಿಷ್ಣುಮೂರ್ತಿ ದೇವಸ್ಥಾನದ ವಿಷ್ಣು ಪ್ರತಿಮೆ ಕೊಡಗರ ದಾಳಿಯಲ್ಲಿ ಅಜೀರ್ಣಹೊಂದಿದ್ದನ್ನು ತೆಗೆದು, ಆ ದೇವಸ್ಥಾನವನ್ನೂ, ಮಂಟಪವನ್ನೂ ಕಟ್ಟಿಸಿ, ಧರ್ಮಸ್ಥಳದಿಂದ ಒಂದು ಉತ್ತಮವಾದ ಮಹಾವಿಷ್ಣು ಪ್ರತಿಮೆ ತರಿಸಿ, ಅದನ್ನು ಇಲ್ಲಿ ಪ್ರತಿಷ್ಟಿಸಿ, ಬ್ರಹ್ಮಕಲಶ ಮಾಡಿಸಿದ್ದರು. ಇಲ್ಲಿಯ ಗೋಪುರ, ಸುತ್ತುಪೌಳಿ ಕಟ್ಟಿಸುವ ಮೊದಲೇ ಆ ಪುಣ್ಯಪುರುಷನು ಅಮರತ್ವನೈದಿದ್ದರು. ಅವರ ಸಂತತಿಯವರು ಈಗಲೂ ಪೆರ್ಮಂಕಿ ಎಂಬಲ್ಲಿದ್ದಾರೆ.

ಶ್ರೀ ಅಮೃತೇಶ್ವರ ದೇವಸ್ಥಾನದ ವಿಶೇಷತೆಗಳು.

ಶ್ರೀ ಅಮೃತೇಶ್ವರ ದೇವಸ್ಥಾನವು ತಿರುವೈಲು ಗ್ರಾಮದಲ್ಲಿ ಇದ್ದು, ತಿರುವೈಲು ಎಂದರೆ ಸುತ್ತಲೂ ಗುಡ್ಡಗಳಿಂದ ಸುತ್ತುವರಿದು ತಿರುವಾದ ಜಾಗದಲ್ಲಿ ಇರುವ ಬೈಲು ಎಂದು ಅರ್ಥೈಸಿ ಕೊಳ್ಳಬಹುದು. ದೇವಸ್ಥಾನವು ವಿಸ್ತಾರವಾದ ಎದುರು ಬಯಲನ್ನು ಹೊಂದಿದ್ದು, ದೇವಸ್ಥಾನದ ಒಳಾಂಗಣವು ಪೌಳಿ, ಗರ್ಭಗುಡಿ , ನಂದಿ ಮಂಟಪ/ ತೀರ್ಥ ಮಂಟಪ, ಒಳ ಗೋಪುರದಲ್ಲಿ ಕೊಡಮನಿತ್ತಾಯ ಹಾಗು ಪರಿವಾರ ದೈವಗಳ ಸಾನಿಧ್ಯ ಇರುವುದು, ದೇವರ ಬಲಿ ನಡೆಯುವ ಹೊರಾಂಗಣದಲ್ಲಿ, ಮಹಾಬಲಿಕಲ್ಲು, ಧ್ವಜಸ್ಥಂಭ, ದೇವಸ್ಥಾನದ ದಕ್ಷಿಣ ಬಾಗದಲ್ಲಿ ಸುಂದರವಾದ ಕಲ್ಲಿನ ವಸಂತ ಮಂಟಪನ್ನು ಹೊಂದ್ದಿದ್ದು ಸುತ್ತಲೂ ಇರುವ ಹೊರಗೋಪುರ ದೇವಸ್ಥಾನಕ್ಕೆ ರಾಜಕಳೆಯನ್ನು ಒದಗಿಸಿವೆ. ದೇವಸ್ಥಾನದ ಉತ್ತರ ದಿಕ್ಕಿನಲ್ಲಿ ಕೆರೆ, ನಾಗಬನ, ಹಾಗು ರಥದ ಕೊಟ್ಟಿಗೆ ಇದೆ.

ಮೂಲ ದೇವರು ಲಿಂಗ ರೂಪಿ ಶ್ರೀ ಅಮೃತೇಶ್ವರ ದೇವರು. ಬಲಿ/ಉತ್ಸವ ಮೂರ್ತಿ: ಶ್ರೀ ಅಮೃತೇಶ್ವರ ದೇವರು.

ದೇವಸ್ಥಾನದಲ್ಲಿ ಆರಾಧಿಸಲ್ಪಡುವ ದೈವಗಳು

 • ಕೊಡಮನಿತ್ತಾಯ
 • ಮಾದ್ರಿತ್ತಾಯ
 • ಚಾಮುಂಡಿತ್ತಾಯ
ಕೊಡಮನಿತ್ತಾಯ ಪ್ರಧಾನ ದೈವ.. ಮಾದ್ರಿತ್ತಾಯ ದೈವವು 'ಮಾದಿರ' ಎಂಬ ತರುಣಿ ದೈವವಾಗಿದೆ, ಈ ಪ್ರದೇಶ ಬಿಟ್ಟು ಇತರ ಪ್ರದೇಶದಲ್ಲಿ ಎಲ್ಲಿಯೂ ಸೇವೆ ಪಡೆದು ಕೊಳ್ಳುವ ಪ್ರತೀತಿ ದೊರೆತಿಲ್ಲ, ಈ ದೈವಕ್ಕೆ ದೇವಸ್ಥಾನದ ಹಿಂಬದಿಯ ಪಶ್ಚಿಮ ದಿಕ್ಕಿನಲ್ಲಿ ‘ಮಾದ್ರಿ ಗುಡ್ಡೆ ಎಂಬ ಸ್ತಳದಲ್ಲಿ ದೈವಸ್ಥಾನವು ಇದೆ. ಈ ದೈವವು ವಿಶೇಷವಾಗಿ ದನಕರುಗಳಿಗೆ ಅಭಯ ನೀಡುವ ದೈವವಾಗಿದೆ ಎಂದು ಹಿರಿಯರಿಂದ ತಿಳಿದು ಬರುತ್ತದೆ. ವ್ಯಾಘ್ರ ಚಾಮುಂಡಿ ಕ್ಷೇತ್ರಜ್ಞ್ಯರ ದೈವವಾಗಿದೆ. ಸುಮಾರು ೫೦ ವರ್ಷಗಳ ಹಿಂದೆ ದೇವಸ್ಥಾನದ ಜಾತ್ರೆ ಪ್ರಾರಭವಾಗುವ ಹಿಂದಿನ ದಿನ ಧ್ವಜಸ್ಥಂಬ (ಕೊಡಿ ಮರ) ಏರಿಸಿ ಧ್ವಜಾರೋಹಣದಂದು ಬಟ್ಟೆಯ ಬೇತಾಳ ಏರಿಸುವ ಸoಪ್ರದಾಯವು ಜಾರಿಯಲ್ಲಿತ್ತು. ತದನಂತರ ೧೯೫೮-೫೯ರಲ್ಲಿ ಪ್ರಸ್ತುತ ಶಾಶ್ವತ ಧ್ವಜಸ್ಥಂಬವನ್ನು ದೇವಸ್ಥಾನದಿಂದ ಸುಮಾರು ೧೦ ಮೈಲಿ ದೂರವಿರುವ ಕೊಳಂಬೆ ಅದ್ಯಪಾಡಿಯಿಂದ ಯಾವುದೇ ದಾರಿ ಮಾಡದೆ ಮರವನ್ನು ಹಗ್ಗದ ಮುಖಾಂತರ ಎಳೆದು ತರಲಾಯಿತು.

ಶ್ರೀ ಅಮೃತೇಶ್ವರ ದೇವರ ರಥಗಳು.

 • ನಂದಿ ಅಥವ ಬಂಡಿರಥ.
 • ಚಂದ್ರಮಂಡಲ ರಥ
 • ದೊಡ್ಡ ರಥ
ಹಿಂದೆ ಜಾತ್ರ ಬಲಿ ಉತ್ಸವದ ಸಮಯದಲ್ಲಿ ೨ ಮರದ ಬೇತಾಳಗಳ ಹಾಗು ಪಲ್ಲಕಿ ಸೇವೆ ಕೂಡ ನಡೆಯುತ್ತಿತ್ತು ಎಂದು ಹಿರಿಯರಿಂದ ತಿಳಿದುಬರುತ್ತದೆ.

ದೇವಸ್ಥಾನದಲ್ಲಿರುವ ಪೌರಾಣಿಕ ಐತಿಹ್ಯಗಳು.

ದೇವಸ್ಥಾನವು ಹಲವಾರು ಪೌರಾಣಿಕ ಐತಿಹ್ಯಗಳನ್ನು ಹೊಂದಿದ್ದು ಕೆಲವನ್ನು ಇಲ್ಲಿ ವಿಶ್ಲೀಸಿಸಲಾಗಿದೆ

ಶಿಲಾಶಾಸನ : ಸುಮಾರು ೭೦೦ ವರ್ಷಗಳ ಹಿಂದೆ ಕೆತ್ತಿರುವಂತಹ ಈ ಶಿಲಾಶಾಸನವು ದೇವಸ್ಥಾನದ ಪುರಾತನ ಪರಂಪರೆಯನ್ನು ಎತ್ತಿ ಹಿಡಿಯುತ್ತದೆ. ಕಲ್ಲಿನ ಎರಡೂ ಬದಿಯಲ್ಲಿ 73 ಸಾಲು ಬರಹ ಹೊಂದಿರುವ ತಿರುವೈಲಿನ ಈ ಶಾಸನ ವಾಮಂಜೂರಿನ ಒಂದು ಅತ್ಯಂತ ಪ್ರಮುಖ ಐತಿಹಾಸಿಕ ದಾಖಲೆ. ಧಾರ್ಮಿಕ ಮತ್ತು ರಾಜಕೀಯ ಭಾಗಗಳೆರಡರಲ್ಲೂ ಇದು ಮಹತ್ವ ಪಡೆದಿದೆ. ಶಿಲಾಶಾಸನದ ವಿವರ ಕೆಳಕಂಡಂತಿದೆ.
ವಂಶ ಮತ್ತು ರಾಜ :ವಿಜಯನಗರ : ಚಕ್ರವರ್ತಿ ಇಮ್ಮಡಿ ಹರಿಹರ
ಕಾಲ:ಶಕ 1321 , ಶುಕ್ಲ ಸಂವತ್ಸರ, ಮೇಷ 1 , ಸೋಮವಾರ AD 1389 ಮಾರ್ಚ್ 26 ಶುಕ್ರವಾರ ( ಮೇಷ 11 ಆದರೆಕ್ರಿ. ಶ. ೧೩೮೯, ಏಪ್ರಿಲ್ 5 , ಸೋಮವಾರ)
ಲಿಪಿ ಮತ್ತು ಭಾಷೆ :ಕನ್ನಡ
ಶಿಲಾಶಾಸನ ಶಾಸನ ವಿಷಯ
ಇದೊಂದುದಾನ ಶಾಸನ.ಮಲ್ಲರಸ ಆಗ ಮಂಗಳೂರು ರಾಜ್ಯದ ರಾಜ್ಯಪಾಲನಾಗಿ ಕಾರ್ಯನಿರ್ವಹಿಸುತಿದ್ದ. ಕದಂಬ ವಂಶದ ಕಾಮದೇವರ ಸನಮಗಳಾದ ಪಡು ಮಲದೇವಿ ಯುತನಗೆ ಚತುರ್ವಿಧಪುರುಷಾರ್ಥವಾಗಿಓ ಮಂಜೂರು ಶ್ರೀ ಅಮೃತೇಶ್ವರ ದೇವಾಲಯದ ಛತ್ರದಲ ್ಲಿನಿತ್ಯ ೧೨ ಮಂದಿಬ್ರಾಹ್ಮಣರಿಗೆ ಭೋಜನದ ವ್ಯವಸ್ಥೆಗಾಗಿ ಭೂದಾನಮಾಡಿದಳು.
ಈ ಭೂಮಿಯನ್ನು ದೊಂಬ ಹೆಗ್ಗಡೆ ಮತ್ತು ಕಯ್ಯರಬಳಿಯ ಬಂಕಿಸಾಂತಯರ ಪರವಾಗಿ ಭೂಮಿಯ ಸಾಗುವಳಿ ಜವಾಬ್ದಾರಿಯನ್ನುಅದೇದೊಂಬ ಹೆಗ್ಗಡೆ ಮತ್ತು ಬಂಕಿಸಾಂತಯರಿಗೆ ವಹಿಸಲಾಯಿತು.
ಈರ್ವರು ತಲಾ 183 ಮುಡಿಯಂತೆ ಒಟ್ಟು 366 ಮುಡಿ ಭತ್ತವನ್ನು ದೇವಾಲಯಕ್ಕೆ ಪ್ರತಿವರ್ಷ ತಪ್ಪದೆ ಸಲ್ಲಿಸಬೇಕೆಂದು ನಿಯಮಮಾಡಿ ಈ ಹಕ್ಕನ್ನು ವಂಶಪಾರಂಪರ್ಯವಾಗಿ ಮಾಡಲಾಯಿತು.ಭೂಮಿಯನ್ನು ಸರ್ವಮಾನ್ಯ (ತೆರಿಗೆರಹಿತ) ವಾಗಿಮಾಡಲಾಯಿತು.
ಚಕ್ರವರ್ತಿಯ ಅನುಮತಿಯಿಂದ ಕೆಲಸಗರನು ದೇವಾಲಯ ಮತ್ತು ಛತ್ರಗಳ ಮೇಲುವೆಚ್ಚಕ್ಕಾಗಿ ವರ್ಷಕ್ಕೆ ೯೦ ಗದ್ಯಾನಹೊನ್ನು ಉತ್ಪತ್ತಿಯ "ಮೊಳ" ಎಂಬ ಹಳ್ಳಿಯನ್ನು ಸರ್ವಮಾನ್ಯ ಮಾಡಿ ದೇವಾಲಯಕ್ಕೆ ನೀಡಿದ. ಪಡುಮಲದೇವಿಯು ತಾನೆಸ್ವತಃ ನಿರ್ಮಿಸಿದ್ದ ಅಡಿಕೆತೂತವೊಂದನ್ನು ಛತ್ರದಲ್ಲಿ ನಡೆಯುವ ಬ್ರಾಹ್ಮಣ ಭೋಜನದ ದಕ್ಷಿಣೆಗಾಗಿ ದೇವಾಲಯಕ್ಕೆ ದಾನಮಾಡಿದಳು. ಇದರ ಜವಾಬ್ದಾರಿಯನ್ನು ಚಟ್ಟಿತ್ತಿಲ ವಂಶದ ಗೋವಿಂದ ಮತ್ತು ನಾರನರಿಗೆ ವಂಶಪಾರಂಪರ್ಯ ಹಕ್ಕಿನೊಂದಿಗೆ ಕೊಡಲಾಯಿತು. ತೋಟವನ್ನು ಸರ್ವಮಾನ್ಯ ಮಾಡಲಾಯಿತು.
ಮಂಗಳೂರಿನ ರಾಜ್ಯಪಾಲ, ಬಂಗರು, ಚೌಟರು, ಅರುವದರಸರು, ಮಂಗಳೂರಿನ ನಖರದವರು, ದೊಂಬಹೆಗ್ಗಡೆ, ಓಮಂಜೂರುಕಯ್ಯರು, ಕಟ್ಟಳೆಯವರೆಲ್ಲ ಕೂಡಿ ಈ ಧರ್ಮಶಾಸನಕ್ಕೆ ಒಪ್ಪಿಗೆನೀಡಿದರು.
ಮಹಾ ಬಲಿಕಲ್ಲು : ಈ ಬಲಿಕಲ್ಲು ಸುಮಾರು ದೇವಸ್ಥಾದಷ್ಟೇ ಪುರಾತನ ಇತಿಹಾಸ ಹೊಂದಿರಬಹುದೆಂದು ಹಿರಿಯರು ಉಲ್ಲೇಖಿಸುತ್ತಾರೆ. ಕಲ್ಲು ಸುಂದರ ಕೆತ್ತನೆಯನ್ನು ಹೊಂದಿರದಿದ್ದರೂ ತಾನು ಕಂಡಂತಹ ಶತಮಾನದ ಸತ್ಯಗಳನ್ನು ವಿವರಿಸಿ ತಿಳಿಸುವಂತಿದೆ.
ಮಹಾ ಬಲಿಕಲ್ಲು side 3 ಮಹಾ ಬಲಿಕಲ್ಲು side 4
ಮಹಾ ಬಲಿಕಲ್ಲು side 1 ಮಹಾ ಬಲಿಕಲ್ಲು side 2

ಬಲಿ/ಉತ್ಸವ ಮೂರ್ತಿ: ಬಲಿ/ಉತ್ಸವ ಮೂರ್ತಿಯು ರಾಜ ಪೋಷಾಕಿನಲ್ಲಿ ಅರಳಿದ ಕಮಲದ ಹೂವಿನ ಮೇಲೆ ನಿಂತ ಸ್ಥಿತಿಯಲ್ಲಿ ಇದ್ದು, ಪೀತಂಬರ ಧಾರಿಯಾಗಿ ಕಂಟಿಹಾರಗಳನ್ನು ಧರಿಸಿ ಕೈಯ್ಯಲ್ಲಿ ಪರಶು, ಮೃಗ, ಅಭಯ ವರಧ ಮುದ್ರೆಯ ಚತುರ್ಹಸ್ಥ, ಕಿರೀಟದಾರಿಯಾಗಿ ಅದರಲ್ಲಿ ಚಂದ್ರ ಮುದ್ರೆಯನ್ನು ಬಿಂಭಿಸಲಾಗಿದೆ, ಈ ಬಲಿಮೂರ್ತಿಯು ಪ್ರಭಾವಳಿ ಮತ್ತು ಪೀಠ ಸಮೇತವಾಗಿ ಒಂದೇ ಎರಕ ಹೊಯ್ಯಲಾಗಿದೆ.
ಅಲಂಕೃತ ಉತ್ಸವ ಮೂರ್ತಿ: ಉತ್ಸವ ಮೂರ್ತಿ:


ಅನ್ನದಾನ
ಪ್ರತಿ ಸೋಮವಾರ, ತಿಂಗಳ ಸಂಕ್ರಮಣ, ಧನುರ್ಮಾಸ ಮತ್ತು ಎಪ್ರಿಲ್ ತಿಂಗಳು ಮಧ್ಯಾಹ್ನ ೧೨:೩೦ ರಿಂದ ೧:೩೦ ರವರೆಗೆ ಅನ್ನಸಂತರ್ಪಣೆ ಇರುವುದು.

ರಜತಾದ್ರಿ ಸಭಾಭವನ

ವಿಶಾಲವಾದ ರಜತಾದ್ರಿ ಸಭಾಭವನ ಹಾಗು ಅನ್ನಪೂರ್ಣ ಅನ್ನಛತ್ರವನ್ನು ತಾ. 11 -03 -2012 ರಂದು ಭಗವದರ್ಪಣೆ ಮಾಡಲಾಗಿದೆ. ಈ ಸಭಾಭವನದಲ್ಲಿ ಸುಮಾರು 700 ರಿಂದ 1 ಸಾವಿರ ಜನರಿಗೆ ಅನುಕೂಲವಾಗುವಷ್ಟು (12,500 ಚ. ಅಡಿ) ಸ್ಥಳಾವಕಾಶವಿದ್ದು, ಅಷ್ಟೇ ವ್ಯವಸ್ಥಿತವಾದ ಅನ್ನಛತ್ರವನ್ನು ಒಳ್ಹಗೊಂಡಿದೆ.


ರಜತಾದ್ರಿ ಸಭಾಭವನ ರಜತಾದ್ರಿ ಸಭಾಭವನ

ಸುಮಾರು ೨೦೦ ವರ್ಷಗಳಿಂದ ದೇವಳದಲ್ಲಿ ಸೇವೆ ಸಲ್ಲಿಸುರುವ ಪಾರಂಪರಿಕ ತಂತ್ರಿ ವರ್ಗ, ಪ್ರಧಾನ ಅರ್ಚಕರು ಹಾಗು ಬಲಿಮೂರ್ತಿ ಹೊರುವವರನ್ನು ಇಲ್ಲಿ ಸ್ಮರಿಸಲಾಗಿದೆ.
ಪಾರಂಪರಿಕ ತಂತ್ರಿ ವರ್ಗ.
 • ಶ್ರೀ ಕೇಶವ ತಂತ್ರಿ
 • ಶ್ರೀ ರಾಮಣ್ಣ ತಂತ್ರಿ
 • ಪ್ರಸ್ತುತ ಶ್ರೀ ನರಸಿಂಹ ತಂತ್ರಿ
ಪಾರಂಪರಿಕ ಪ್ರಧಾನ ಅರ್ಚಕರು.
 • ಸುಮಾರು ೨೦೦ ವರ್ಷಗಳ ಹಿಂದೆ ಶ್ರೀ ವೆಂಕಟೇಶ್ ಭಟ್
 • ಶ್ರೀ ವಿಷ್ಣು ಮೂರ್ತಿ ಭಟ್ ( ಶ್ರೀ ವೆಂಕಟೇಶ್ ಭಟ್ ಮಗ)
 • ಶ್ರೀ ನಾರಾಯಣ ಭಟ್ ( ಶ್ರೀ ವೆಂಕಟೇಶ್ ಭಟ್ ಮಗ)
 • ಶ್ರೀ ಶಂಕರ ನಾರಾಯಣ ಭಟ್( ಶ್ರೀ ವೆಂಕಟೇಶ್ ಭಟ್ ಮಗ)
 • ಶ್ರೀ ದಾಸಣ್ಣ ಭಟ್' ( ಶ್ರೀ ವೆಂಕಟೇಶ್ ಭಟ್ ಮಗ)
 • ಶ್ರೀ ಗಣಪತಿ ಭಟ್ (ಶ್ರೀ ವಿಷ್ಣು ಮೂರ್ತಿ ಭಟ್ ಮಗ)
 • ಶ್ರೀ ಸುಬ್ರಮಣ್ಯ ಭಟ್ : ೧೯೩೦-೧೯೩೯ (ಶ್ರೀ ವಿಷ್ಣು ಮೂರ್ತಿ ಭಟ್ ಮಗ)
 • ಶ್ರೀ ಕೃಷ್ಣ ಭಟ್ : ೧೯೫೭-೧೯೫೮ (ಶ್ರೀ ವಿಷ್ಣು ಮೂರ್ತಿ ಭಟ್ ಮಗ)
 • ಶ್ರೀ ನರಸಿಂಹ ಭಟ್: ೧೯೩೯- ೧೯೭೯ (ಶ್ರೀ ವಿಷ್ಣು ಮೂರ್ತಿ ಭಟ್ ಮಗ)
 • ಶ್ರೀ ರಮೇಶ್ ಭಟ್ : ೧೯೭೪-೧೯೭೩ (ಶ್ರೀ ನರಸಿಂಹ ಭಟ್ ಮಗ)
 • ಶ್ರೀ ವಿಷ್ಣುಮೂರ್ತಿ ಭಟ್ : ೧೯೯೩-೧೯೯೪ (ಶ್ರೀ ನರಸಿಂಹ ಭಟ್ ಮಗ)
 • ಶ್ರೀ ಗೋಪಾಲ ಕೃಷ್ಣ ಭಟ್ : ೧೯೯೪ ರಿಂದ ಪ್ರಸ್ತುತ (ಶ್ರೀ ನರಸಿಂಹ ಭಟ್ ಮಗ)
ಬಲಿಮೂರ್ತಿ ಹೊತ್ತವರು.
 • ಪಚ್ಚನಾಡಿ ಶ್ರೀ ದಾಸಣ್ಣ ಭಟ್
 • ಶ್ರೀ ಅನಂತರಾಮ ಭಟ್ (ಶ್ರೀ ದಾಸಣ್ಣ ಭಟ್ ಮಗ)
 • ಪಡುಬಿದ್ರಿ ಶ್ರೀ ಹರಿ ಭಟ್
 • ಶ್ರೀ ಅನಂತರಾಮ ಭಟ್ (ಶ್ರೀ ದಾಸಣ್ಣ ಭಟ್ ಮಗ)
 • ಶ್ರೀ ವಾಸುದೇವ ಭಟ್
 • ಶ್ರೀ ಅನಂತರಾಮ ಭಟ್ (ಶ್ರೀ ದಾಸಣ್ಣ ಭಟ್ ಮಗ)
 • ಪ್ರಸ್ತುತ ಶ್ರೀ ಲಕ್ಸ್ಮಿನಾರಾಯಣ ಭಟ್ ( ಶ್ರೀ ಅನಂತರಾಮ ಭಟ್ ಮಗ)
ದೇವಸ್ಥಾನದ ಆಡಳಿತ ಇತಿಹಾಸ

ಅಂದಾಜು ಸುಮಾರು ೧೨೦ ವರ್ಷದ ಹಿಂದಿನಿಂದ ಆಡಳಿತ ನಡೆಸಿದ ಮುಕ್ತೇಸರರರನ್ನು ಇಲ್ಲಿ ಸ್ಮರಿಸಲಾಗಿದೆ. ಸುಮಾರು ೧೨೦ ವರ್ಷಗಳ ಹಿಂದೆ

 • ಶ್ರೀ.ಶಿವಣ್ಣಯ್ಯ ಪೆರ್ಮಂಕಿ
 • ಶ್ರೀ.ದೇವು ಶೆಟ್ಟಿ, ತಿರವೈಲು ಗುತ್ತು
 • ಶ್ರೀ.ಮುತ್ತಯ್ಯ ಶೆಟ್ಟಿ, ಬಡಕರೆ
 • ಶ್ರೀ.ಗಣಪತಿ ಭಟ್, ತಿರವೈಲು
 • ಶ್ರೀ.ದಾಸಣ್ಣ ಭಟ್, ತಿರವೈಲು
 • ಶ್ರೀ.ಕಿಟ್ಟಪ್ಪ ಶೆಟ್ಟಿ ತಿರವೈಲು
 • ಶ್ರೀ.ವೆಂಕ್ಕಪ್ಪಯ್ಯ, ಬೊಂಡಂತಿಲ
 • ಶ್ರೀ.ಕಿಟ್ಟಪ್ಪ ಶೆಟ್ಟಿ, ತಿರವೈಲು
 • ಶ್ರೀ.ಪಧ್ಮನಾಭ ಶೆಟ್ಟಿ, ಐಕಳ ಬಾವ: ೧೯೫೮ – ೧೯೯೧
 • ಶ್ರೀ.ಸದಾಶಿವ ಶೆಟ್ಟಿ, ಬೊಂಡಂತಿಲ ಗುತ್ತು: ೧೯೯೨-೨೦೦೬
 • ಶ್ರೀ.ಪ್ರಭಾಕರ ಶೇಖ, ತಿರವೈಲು: ಜನವರಿ- ಮಾರ್ಚ್ ೨೦೦೭
 • ಶ್ರೀ.ಸೀತಾರಾಮ ಜಾಣು ಶೆಟ್ಟಿ, ತಿರವೈಲು : ಮಾರ್ಚ್ ೨೦೦೭ - ಮೇ ೨೦೦೮
 • ಶ್ರೀ.ಚಂದ್ರಹಾಸ ರೈ ಮೇ ೨೦೦೮ ರಿಂದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲಿಸುತ್ತಾ ಇದ್ದಾರೆ.

ಭಗವದನುಗ್ರಹಕ್ಕೊಸ್ಕರ ದೇವಸ್ತಾನದಲ್ಲಿ ನಡೆಯುತ್ತಿರುವ ವಿಶೇಷ ಪೂಜೆಗಳು: ದೇವಸ್ಥಾನದಲ್ಲಿ ಇಟ್ಟಂತಹ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂದಂತೆ, ಮೃತ್ಯುಭಯ ಪರಿಹಾರಕ್ಕಾಗಿ, ಮೃತ್ಯುಂಜಯ ಹೋಮ, ರುದ್ರಾಭಿಷೇಕ, ದೀಪಾಲಂಕಾರ ಪೂಜೆ, ಶೀಘ್ರ ವಿವಾಹ ಯೂಗಕ್ಕಾಗಿ "ಸ್ಮಯಂವರ ಪಾರ್ವತಿ ಅರ್ಚನೆ" ಹಾಗು ರಂಗ ಪೂಜೆಯನ್ನು ದೇವಸ್ಥಾನದಲ್ಲಿ ನಡೆಸಲಾಗಿತ್ತದೆ. ಈ ಪೂಜಾ ಫಲದಿಂದ ಭಕ್ತರ ಮನದ ಅಭೀಷ್ಟೆಯೂ ಶೀಘ್ರವಾಗಿ ನೆರವೇರುತ್ತಿರುವುದು ನಿತ್ಯದ ಸತ್ಯದ ವಿಚಾರ.

ಸ್ಥಳಪುರಾಣ Source (R1): ಹಿಂದೂ ಧಾರ್ಮಿಕ ಮತ್ತು ಧರ್ಮದಾಯ ದತ್ತಿಗಳ ಇಲಾಖೆ website & ಸಂಗ್ರಹಿತ ಮಾಹಿತಿಗಳು